h1

ಅಂತಿಮ ಕಂತು ಪ್ರಕರಣ ೧೩೬೯

June 10, 2009

ಪ್ರಸಾರ : ೧೨ ಜೂನ್ ೨೦೦೯, ಶುಕ್ರವಾರ

ಹೊಸಮನೆ ಸದಾನಂದ ತನ್ನ ಕುತ್ತಿಗೆಯನ್ನ ತಾನೇ ಹಿಸುಕಿಕೊಳ್ಳಲು ಆರಂಭಿಸುತ್ತಾನೆ. ಎಲ್ಲರೂ ಬೆರಗಾಗುತ್ತಾರೆ. ಅಲ್ಲಿದ್ದ ಜೈಲರ್‍ ಮತ್ತು ಇತರರು ಹೊಸಮನೆ ಸದಾನಂದನನ್ನು ಬಿಡಿಸುತ್ತಾರೆ. ಹೊಸಮನೆಯು ಹುಚ್ಚನಂತೆ ಮತ್ತೆ ಅಡಿಗರ ’ಕೂಪಮಂಡೂಕ’ ಪದ್ಯದ ಸಾಲುಗಳನ್ನು ಹೇಳುವಾಗ ಪೂರ್‍ವಿ ಅಲ್ಲಿ ನಿಲ್ಲಲಾಗದೆ ಹೊರಡುತ್ತಾಳೆ. ಸುಕನ್ಯಾ ಅವಳ ಹಿಂದೆ ಹೋಗಲಾಗದಂತೆ ಹೊಸಮನೆ ಸದಾನಂದ ಅವಳನ್ನು ಕರೆದು ಮಾತಾಡಿಸುತ್ತಾನೆ. ಸಂದರ್‍ಶಕರ ಕೊಠಡಿಯ ಒಂದು ಮೂಲೆಯಲ್ಲಿ ಕುಸಿದು ಕೂತು ಗೊಣಗುತ್ತಾನೆ.

ಹತಾಶಳಾಗಿ ಮನೆಗೆ ಬರುವ ಪೂರ್‍ವಿಗೆ ಮೇಘಾ ಫೋನ್ ಮಾಡುತ್ತಾಳೆ. ಹೇಗಿತ್ತು ತಾಯಿಯೊಡನೆ ಹೋಗಿದ್ದ ಪ್ರವಾಸ ಎನ್ನುತ್ತಾಳೆ. ಪೂರ್‍ವಿಯು ಜೈಲಿನಲ್ಲಿ ಹೊಸಮನೆಯನ್ನು ನೋಡಿದ ವಿವರ ಹೇಳುತ್ತಾ ಆತ ತನ್ನ ಅಪ್ಪ ಎಂದಾಗ ಮೇಘಾಳಿಗೂ ಅಚ್ಚರಿಯಾಗುತ್ತದೆ. ಪೂರ್‍ವಿಯು ತಾನು ಅನುಭವಿಸುತ್ತಾ ಇರುವ ಸಂಕಟ ಕುರಿತು ತಿಳಿಸುತ್ತಾಳೆ. ಮೇಘಾ ಈ ಕೂಡಲೇ ಅಪ್ಪ(ಮಿತ್ರ)ನ ಮನೆಗೆ ಬಾ ಇನ್ನೊಂದು ಪವಾಡವಿದೆ ಎನ್ನುತ್ತಾಳೆ.

*

ಮಿತ್ರನ ಮನೆಯಲ್ಲಿ ಪ್ರಭುದೇವನನ್ನು ಕಂಡು ಪೂರ್‍ವಿಗೆ ಅಚ್ಚರಿ. ಮೇಘಾ ಮತ್ತು ಕಲ್ಯಾಣಿಯು ಪ್ರಭುವನ್ನ ಅಂಜಲಿಯೇ ಕರೆದು ತಂದಿದ್ದಾಳೆ ಎನ್ನುತ್ತಾರೆ. ಅಂಜಲಿ ತನ್ನ ಅಪ್ಪನಿಗೆ ಅವನ ಮೂರನೇ ಹೆಂಡತಿ ಮೋಸ ಮಾಡಿದ್ದಾಳೆ. ಅವನೀಗ ಮಗುವಾಗಿದ್ದಾನೆ ಎನ್ನುತ್ತಾಳೆ. ಇನ್ನು ಈ ಮಗುವನ್ನು ನೋಡಿಕೊಳ್ಳುವವಳು ನಾನು ಎನ್ನುತ್ತಾಳೆ. ಆಗಲೇ ಮಿತ್ರ ಎಲ್ಲಿ ಎಂದು ಹುಡುಕುವ ಸೋದರಿಯರಿಗೆ ಆತ ಯಾರೋ ಗೆಳೆಯರನ್ನು ನೋಡ ಹೋಗಿದ್ದಾರೆ ಎಮದು ತಿಳಿಸುವ ಅನುಸೂಯ. ಮಿತ್ರ ಅವರಿಗಾಗಿ ಕೊಟ್ಟಿರುವ ಕವರ್‍ರನ್ನು ನೀಡುತ್ತಾಳೆ. ಆ ಕವರ್‍ರಿನಲ್ಲಿರುವ ಸಿಡಿಯನ್ನು ನೋಡಿ ಎಲ್ಲರೂ ಅಚ್ಚರಿ ಪಡುತ್ತಲೇ ಅದನ್ನು ಪ್ಲೇಯ‌ರ್‍ಗೆ ಹಾಕುತ್ತಾರೆ. ಮಿತ್ರ ತಾನು ಬೆಳೆಸಿದ ಹಕ್ಕಿಗಳ ಜೊತೆಗೆ ಮಾತಾಡುತ್ತಾನೆ. ಮಿತ್ರ ತಾನು ತಂಬೂರಿಯಾದದ್ದು. ತನ್ನೊಂದಿಗೆ ಬೆಳೆದ ಹಕ್ಕಿಗಳೆಲ್ಲ ತಂತಿಯಾಗಿ ಶೃತಿ ಸೇರಿ ಸಂಗೀತವಾಗಿದ್ದನ್ನು ತಿಳಿಸುತ್ತಾನೆ. ಎಲ್ಲರೂ ಅಚ್ಚರಿಯಲ್ಲಿ ಉಳಿಯುತ್ತಾರೆ.

*

ಮಿತ್ರ ತನ್ನ ಮರದಲ್ಲಿ ಬೆಳೆದ ಹಕ್ಕಿಗಳು ಹಾರುವುದನ್ನು ಕಲಿತಿವೆ. ಅವುಗಳಿಗೆ ತನ್ನ ಅಗತ್ಯವಿಲ್ಲವೆಂದು ತಾನು ಅಗತ್ಯ ಇರುವ ಹೊಸ ಹಕ್ಕಿಗಳನ್ನು ಹುಡುಕಿ ಹೊರಟಿದ್ದೇನೆ ಎನ್ನುತ್ತಾನೆ. ನಾಲ್ವರು ಅಕ್ಕ-ತಂಗಿಯರು ಮಾತಾಡದ ಸ್ಥಿತಿ ತಲುಪುತ್ತಾರೆ. ಅವರ್‍ಯಾರೂ ತನ್ನನ್ನ ಹುಡುಕುವುದು ಬೇಡ ಎನ್ನುವ ಮಿತ್ರ ಅವರೆಲ್ಲರ ಜವಾಬ್ದಾರಿಗಳನು ನೆನಪಿಸುತ್ತಾನೆ. ಜೀವನದ ಕಡೆಯ ಹನಿಯವರಗೆ ಬದುಕಿ ಎಂದು ಹರಸುತ್ತಾನೆ. ಸೋದರಿಯರು ಕೊರಗುತ್ತಾ ತಮ್ಮ ತಮ್ಮ ಕೆಲಸಗಳಿಗೆ ಹೊರಟಾಗ ಕಲ್ಯಾಣಿಯು ಮಿತ್ರನಿಗಾಗಿ ಕೊರಗುತ್ತಾಳೆ.

ನಾಲ್ವರು ಪುಟ್ಟ ಹೆಣ್ಣುಮಕ್ಕಳಿಗಾಗಿ ವಚನ ಹೇಳಿಕೊಡುತ್ತಾ ದೂರಕ್ಕೆ ಸಾಗುವ ಮಿತ್ರ ಕ್ಯಾಮೆರಾಗೆ ಕಾಣುತ್ತಾನೆ.

ನಾಕುತಂತಿಯ ನಿರ್‍ದೇಶಕರು ಕ್ಯಾಮೆರಾದ ಎದುರಿಗೆ ಕಾಣಿಸಿಕೊಂಡು ನಾಕುತಂತಿಯನ್ನು ಆರುವರ್ಷಗಳ ಕಾಲ ಸಲಹಿದ ಬಂಧುಗಳಿಗೆ ನಮಸ್ಕಾರ ಹೇಳುತ್ತಾರೆ ಮತ್ತು ಕೆಲವು ದಿನಗಳ ವಿರಾಮದ ನಂತರ ನಮ್ಮ ತಂಡ ಹೊಸಕತೆಯೊಡನೆ ನಿಮ್ಮೆದುರಿಗೆ ಬರಲಿದ ಎಂದು ತಿಳಿಸುತ್ತಾರೆ.

* * *

ಇಲ್ಲಿಗೆ ’ನಾಕುತಂತಿ’ಯ ಪ್ರಯಾಣ ಮುಗಿಯುತ್ತದೆ.

೨೦೦೪ರ ಮಾರ್‍ಚಿ ತಿಂಗಳ ೨೭ನೇ ತಾರೀಖು ಆರಂಭವಾದ ಈ ಪ್ರಯಾಣ ೨೦೦೯ರ ಜೂನ್ ೧೨ಕ್ಕೆ ಮುಗಿಯುತ್ತಿದೆ.

ನಾಕುತಂತಿಯ ಎಲ್ಲಾ ಅಭಿಮಾನಿಗಳಿಗೆ ಈ ಕತೆಯನ್ನು ಬರೆದು ನಿರ್‍ದೇಶಿಸಿದ ಬಿ.ಸುರೇಶ ಹಾಗೂ ’ನಾಕುತಂತಿ’ ತಂಡದ ನಮನಗಳು.

h1

ಪ್ರಕರಣ ೧೩೬೮

June 10, 2009

ಪ್ರಸಾರ : ೧೧ ಜೂನ್ ೨೦೦೯, ಗುರುವಾರ

ಪೂರ್‍ವಿಯನ್ನು ತಡೆಯುವ ಸುಕನ್ಯಾ, ’ನಿನಗೆ ಜೀವ ಕೊಟ್ಟವನ ಸಾವನ್ನು ನೀನೇ ಬಯಸದಿರು’ ಎನ್ನುತ್ತಾಳೆ. ದೊಡ್ಡ ಸತ್ಯವನ್ನು ತಿಳಿಯುವ ಪೂರ್‍ವಿಯು ಬೆರಗಾಗುತ್ತಾಳೆ. ಹೊಸಮನೆ ಸದಾನಂದನೇ ತನ್ನ ತಂದೆಯೇ ಎಂದು ಕೇಳುವ ಪೂರ್‍ವಿಗೆ ಹೌದು ಎನ್ನುವ ಸುಕನ್ಯಾ ತಾನು ಹೇಗೆ ಅವನ ಬಲೆಗೆ ಬಿದ್ದೆ ಎಂಬುದನ್ನ ಸೂಕ್ಷ್ಮವಾಗಿ ತಿಳಿಸುತ್ತಾಳೆ. ಜೈಲು ಸೇರಿರುವ ಆ ನಿನ್ನ ತಂದೆಯೂ ಪಶ್ಚಾತ್ತಾಪದಲ್ಲಿ ನರಳುತ್ತಾನೆ, ಮನುಷ್ಯನಾಗುತ್ತಾನೆ ಎನ್ನುವ ಸುಕನ್ಯಾಗೆ ನನ್ನೊಂದಿಗೆ ಬರುವಿರಾ ಎನ್ನುವ ಪೂರ್‍ವಿಯೂ ತಾನು ತನಗೆ ಜೀವ ಕೊಟ್ಟವನನ್ನು ನೋಡಬೇಕು ಎನ್ನುತ್ತಾಳೆ. ಸುಕನ್ಯಾ ಅಚ್ಚರಿಯಲ್ಲಿ ನಿಲ್ಲುತ್ತಾಳೆ.

*

ಜೈಲಿನ ಸೆಲ್ಲಿನಲ್ಲಿರುವ ಹೊಸಮನೆ ಸದಾನಂದನಿಗೆ ಬಿಳಿಯ ಸಮವಸ್ತ್ರ ನೀಡುವ ಜೈಲರ್‍. ಹೊಸಮನೆ ಸದಾನಂದ ಹುಚ್ಚನಂತೆ ಮಾತು ಸಾಯಬೇಕು ಎಂಬ ಮಾತಾಡುತ್ತಾನೆ. ಆತನನ್ನು ನೋಡಲು ಈಗ ಮುಖ್ಯಮಂತ್ರಿ ಆಗಿರುವ ಸುಕನ್ಯಾ ಬಂದಿದ್ದಾರೆ ಎನ್ನುವ ಜೈಲರ್‍ ಮಾತು ಕೇಳಿ ಬಟ್ಟೆ ಧರಿಸುವ ನಿರ್‍ಧಾರಕ್ಕೆ ಬರುವ ಹೊಸಮನೆ ಸದಾನಂದ.

ಸಂದರ್‍ಶಕರ ಕೊಠಡಿಗೆ ಬರುವ ಹೊಸಮನೆ ಸದಾನಂದನನ್ನು ನೋಡಿ ಸುಕನ್ಯಾಗೆ ಸಂಕಟವಾಗುತ್ತದೆ. ಮಾತಾಡದೆ ಕೂತವನನ್ನು ಮಾತಾಡಿಸಲು ಆಕೆ ಪ್ರಯತ್ನಿಸುತ್ತಾಳೆ. ಹೊಸಮನೆಯು ಸುಕನ್ಯಾಳನ್ನು ಮೊದಲು ಬೇಟಿಯಾದಾಗ ಹೇಳಿದ ಅಡಿಗರ ‘ಕೂಪಮಂಡೂಕ’ ಪದ್ಯವನ್ನು ಹೇಳುತ್ತಾಳೆ. ಹೊಸಮನೆ ಸದಾನಂದ ಪದ್ಯವನ್ನು ನೆನೆದು ತಾನು ಸಾಲು ಹೇಳುವಾಗ ಹುಚ್ಚನಂತೆ ಆಡುತ್ತಾನೆ. ಅದನ್ನು ನೋಡಿ ಅಚ್ಚರಿ ಅನುಕಂಪದಲ್ಲಿ ಉಳಿಯುವ ಪೂರ್‍ವಿ.

*

ಹೊಸಮನೆ ಸದಾನಂದನಿಗೆ ಆತನ ಮಗಳು ಪೂರ್‍ವಿಯೆಂದು ತಿಳಿದು ಬೆರಗಾಗುತ್ತದೆ. ಪೂರ್‍ವಿಯೂ ತನಗಾಗಿ ಅಷ್ಟೆಲ್ಲಾ ಜನರನ್ನು ಕೊಂದವನಿಗೆ ತಾನೇ ಎದುರಿಗೆ ಬಂದಾಗ ಮಾತು ಸಾಯಿತೇ ಎಂದು ಕೇಳುತ್ತಾಳೆ. ಸುಕನ್ಯಾಳು ಇಷ್ಟೂ ದಿನ ಈ ಸತ್ಯವನ್ನು ಮುಚ್ಚಿಟ್ಟು ಒಳ್ಳೆಯದು ಮಾಡಿದಳು ಎನ್ನುವ ಹೊಸಮನೆ ಸದಾನಂದ ತನ್ನ ಕುತ್ತಿಗೆಯನ್ನ ತಾನೇ ಹಿಸುಕಿಕೊಳ್ಳಲು ಆರಂಭಿಸುತ್ತಾನೆ. ಎಲ್ಲರೂ ಬೆರಗಾಗುತ್ತಾರೆ.

h1

ಪ್ರಕರಣ ೧೩೬೭

June 9, 2009

ಪ್ರಸಾರ : ೧೦ ಜೂನ್ ೨೦೦೯, ಬುಧವಾರ

ಹೊಸಮನೆಯು ಮಾಡಿರುವ ಕೊಲೆಗಳಿಗೆಲ್ಲಾ ಸಾಕ್ಷಿ ಸಿಕ್ಕಿದೆ. ನಾಳೆ ಆತನನ್ನ ಅರೆಸ್ಟ್ ಮಾಡಲು ಪೋಲೀಸರು ಬರಲಿದ್ದಾರೆ ಎಂದು ಮೇಘಾ ವಿವರಿಸಿದಾಗ ಹೊಸಮನೆ ಗಾಬರಿಯಾಗುತ್ತಾನೆ. ನಿಖಿಲ್‌ನ ನೆನೆಪಿಗಾಗಿ ಹೊಸಮನೆ ಸದಾನಂದ ಕೊಟ್ಟ ಹೂವನ್ನು ಇಟ್ಟುಕೊಳ್ಳುತ್ತೇನೆ ಎನ್ನುವ ಮೇಘಾಳ ಮಾತು ಕೇಳಿ ಅವಸರದಿಂದ ಹೊರಡುವ ಹೊಸಮನೆ ಸದಾನಂದ
ಹೊಸಮನೆ ಸದಾನಂದನ ಮನೆಯಲ್ಲಿ ಕವಿತಾಳ ಮದುವೆಯ ಸಂಭ್ರಮಕ್ಕಾಗಿ ಪಾಯಸ ತಿನ್ನುತ್ತಾ ಇರುವ ರಾಂರಾವ್ ನಾಯಕ್, ದಾವಣಗೇರಿ, ಕೋಟಾ ಅವರಿಗೆ ಇಂದೇ ನಾಣು ನಾಮಪತ್ರ ಸಲ್ಲಿಸುವೆ ಎನ್ನುವ ಹೊಸಮನೆ ಸದಾನಂದನ ಮಾತು ಕೇಳಿ ಅಚ್ಚರಿಯಾಗುತ್ತದೆ. ಹೊಸಮನೆಯು ಅವರೊಂದಿಗೆ ನಾಮಪತ್ರ ಸಲ್ಲಿಸಲೆಂದು ಹೊರಟಾಗ ಬರುವ ಎಸಿಪಿಯವರು ಆತನನ್ನು ನಂದಿತಾ ಮತ್ತು ಶ್ಯಾಮಲಾ ಕೊಲೆ ಪ್ರಕರಣದಲ್ಲಿ ಬಂಧಿಸುತ್ತಾ ಇರುವುದಾಗಿ ಹೇಳಿ ಕೋಳ ಹಾಕುತ್ತಾರೆ.

*

ಹೊಸಮನೆ ಸದಾನಂದನಿಗೆ ಜಾಮೀನು ಸಿಗುವುದು ಸಹ ಕಷ್ಟ ಎಂದು ತಿಳಿಯುವ ಜೊತೆಗಾರರು ಪಕ್ಷಾಂತರ ಮಾಡುವ ಮಾತಾಡುವಾಗ ಮನೆಯಾಚೆ ಹೊಸಮನೆಯನ್ನು ಮಾಧ್ಯಮದವರು ಮುತ್ತಿಕೊಂಡು ಪ್ರಶ್ನೆ ಕೇಳುತ್ತಾರೆ. ಆಗಲೇ ಅಲ್ಲಿಗೆ ಬರುವ ಮೇಘಾಳು ಅವನಿಗೆ ಶುಭ ಕೋರಿ ಹೂಗುಚ್ಛ ಕೊಡುತ್ತಾಳೆ. ಯಾರಿಗೂ ಪ್ರತಿಕ್ರಿಯಿಸದೆ ಸಾಗುವ ಹೊಸಮನೆ ಸದಾನಂದ. ಎಸಿಪಿಯು ಮೇಘಾಳಿಗೆ ಕಲ್ಯಾಣಿಯ ವಿಷಯ ತಿಳಿಸುತ್ತಾ ಅವಳ ತಂದೆ ಮತ್ತು ಗಂಡನ ಬಿಡುಗಡೆಯಾಗಿದೆ ಎನ್ನುತ್ತಾರೆ.
ಕಲ್ಯಾಣಿಯ ಮನೆಗೆ ಬರುವ ಸುಬ್ಬರಾಮು ಮತ್ತು ಸುಧೀಂದ್ರನ್ನ ನೋಡಿ ಲಲಿತೆ ಮತ್ತು ಕಲ್ಯಾಣಿಯ ಅತ್ತೆಯು ಸಂಭ್ರಮ ಪಡುತ್ತಾರೆ. ಮನೆಯಲ್ಲಿರುವ ಫಾತಿಮಾ ಮತ್ತು ಅವಳ ಮಗುವನ್ನು ಕಲ್ಯಾಣಿಯು ನೋಡಿಕೊಳ್ಳುತ್ತಾ ಇರುವ ವಿವರ ತಿಳಿಯುವ ಸುಧೀಂದ್ರನು ಇನ್ನುಮುಂದೆ ತಾನು ಕಲ್ಯಾಣಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತೇನೆ ಎಂದಾಗ ಕಲ್ಯಾಣಿಗೆ ನೆಮ್ಮದಿ ಮೂಡುತ್ತದೆ.

*

ಪೂರ್‍ವಿಯು ಹೊಸಮನೆ ಸದಾನಂದ ಬಂಧಿತನಾದ ಎಂದು ಸಂಭ್ಮಿಸುತ್ತಾಳೆ. ಗಳ ಸಂತಸ ನೋಡಿ ತಾನೂ ಸಂತಸ ಪಡುವ ಸುಕನ್ಯಾ. ಹೊಸಮನೆ ಸದಾನಂದನಿಗೆ ಜೀವಾವಧಿ ಶಿಕ್ಷೆಯಾದರೆ ಸಾಲದು ಅವನಿಗೆ ಮರಣದಂಡನೆಯಾಗಬೇಕು ಎಂದು ಪೂರ್‍ವಿಯೂ ಕುಪಿತಳಾಗಿ ಮಾತಾಡುವಾಗ ಅವಳನ್ನು ತಡೆಯುವ ಸುಕನ್ಯಾ, ’ನಿನಗೆ ಜೀವ ಕೊಟ್ಟವನ ಸಾವನ್ನು ನೀನೇ ಬಯಸದಿರು’ ಎನ್ನುತ್ತಾಳೆ. ದೊಡ್ಡ ಸತ್ಯವನ್ನು ತಿಳಿಯುವ ಪೂರ್‍ವಿಯು ಬೆರಗಾಗುತ್ತಾಳೆ.